Saturday 24 March 2012

ಮೂರು ಮಂದಿಯ ಹುಚ್ಚು ಪಯಣ

ಸುಮಾರು ಒಂದು ವರ್ಷದ ಹಿಂದಿನ ಕಥೆ. ಅದು ಮಳೆಗಾಲದ ಸಮಯ. ಬಹಳಷ್ಟು ಚಿಂತಿಸಿದ ನಂತರ, ಏನೇ ಆಗಲಿ ಈ ಬಾರಿ ಮಲೆನಾಡಿನ ಮಡಿಲಿಗೆ ಹೋಗಲೇ ಬೇಕೆಂದು ನಿರ್ಧರಿಸಿದ್ದೆವು. ಅದು ಆಗ ಬಹಳಷ್ಟು ಚರ್ಚೆಯಲ್ಲಿದ್ದ ತಾಣ. ಎಂದಿನಂತೆ, ಎಲ್ಲಾ ಸ್ನೇಹಿತರಿಗೆ ಇಮೇಲ್ ನಲ್ಲಿ ಸಂದೇಶ ಹೊರಡಿಸಿದ್ದೆವು. ಕೆಲವರು ಕೆಲಸದ ಕಾರಣದಿಂದ ತಪ್ಪಿಸಿಕೊಂಡರೆ ಕೆಲವರಿಗೆ ಮಲೆನಾಡಿನ ಮಳೆಗಾಲದ ಭೀತಿಯಿತ್ತು. ಕೊನೆಗೆ ಉಳಿದಿದ್ದು ಮೂರು ಮಂದಿ. ನಾನು, Fast and Furious ಲೋಕಿ ಮತ್ತು Comedy king ರವಿ.
ಶುಕ್ರವಾರದಂದೆ ನಾನು ಮತ್ತು ಲೋಕಿ ರಜ ಹಾಕಿ, ಒಬ್ಬ ಸ್ನೇಹಿತೆಯ ಗೃಹಪ್ರವೇಶ ಮುಗಿಸಿ, ಟ್ರೆಕ್ಕಿಂಗ್ ಶಾಪಿಂಗ್ ಮಾಡಲು ಹೊರಟೆವು. ಒಂದು ದೊಡ್ಡ ಹಗ್ಗ, ಮಳೆಯಿಂದ ರಕ್ಷಿಸುವ ಪ್ಲಾಸ್ಟಿಕ್ ಶೀಟ್, ಟ್ರಾಕ್ ಸ್ಯೂಟ್ ಮತ್ತು ಇನ್ನಿತರ ವಸ್ತುಗಳನ್ನು ಖರೀದಿ ಮಾಡಿ ಮನೆಗೆ ಹಿಂದಿರುಗಿದೆವು. ಅತ್ತ ರವಿ ಕೆಲಸದಲ್ಲಿ ನಿರತನಾಗಿ ಮೊಬೈಲ್ನಿಂದಲೇ ನಮ್ಮೊಂದಿಗೆ ಸಂಪರ್ಕದಲ್ಲಿದ್ದ.
ಕೊನೆಗೂ ರಾತ್ರಿ ೧೦ ಘಂಟೆ ಆಗೇ ಹೋಯಿತು. ಮೂರೂ ಮಂದಿ ತುಮಕೂರು ರಸ್ತೆಯಲ್ಲಿ ಬಸ್ ಗಾಗಿ ಕಾಯುತ್ತಿದ್ದೆವು. ಅಂದು ನಮ್ಮ ಪಯಣ ಸಾಗುತ್ತಿದ್ದುದು  ಸಕಲೇಶಪುರದ ಕಡೆಗೆ.
ಶುಕ್ರವಾರ ರಾತ್ರಿಯಾದ್ದರಿಂದ ಎಲ್ಲ ಬಸ್ ಗಳು full ಆಗಿದ್ದವು. ಕೊನೆಗೆ ಮೂರೂ ಸೀಟ್ ಇದ್ದ ಹಾಸನದ ಬಸ್ ಹತ್ತಿ ಹಾಸನಕ್ಕೆ ಹೊರಟೆವು. ಎಂದಿನಂತೆ ನಮಗೆ ಸಿಕ್ಕಿದ್ದು ಕೊನೆಯ ಮೂರೂ ಸೀಟ್!!!!!.




ಹಾಸನದಲ್ಲಿ ಸ್ವಲ್ಪ ಸಮಯ ಕಾದ ನಂತರ ಸಕಲೇಶಪುರಕ್ಕೆ ಬೇರೆ ಬಸ್ ಸಿಕ್ಕಿತು. ಸಕಲೆಶಪುರದದಿಂದ ಸ್ವಲ್ಪ ಮುಂದೆ, ಶಿರಾಡಿ ಘಾಟಿ ಶುರು ಆಗವ ಸ್ವಲ್ಪ ಮೊದಲು ಇಳಿದೆವು.
ಝುಳು ಝುಳು ಹರಿಯುವ ನದಿ, ಹಸುರಿನ ಯವ್ವನದಿಂದ ಮೆರೆಯುತ್ತಿದ್ದ ಮಲೆನಾಡು, ಕಾಡು ಮೇಡು, ರಸ್ತೆಯಲ್ಲಿ ದನಕರುಗಳ ಓಡಾಟ, ಅಬ್ಬ ನೋಡಲಿಕ್ಕೆ ಎರಡು ಕಣ್ಣು ಸಾಲದು ಎನಿಸುತ್ತಿತ್ತು. ಅಲ್ಲೇ ಒಂದು ಸಣ್ಣ tea shop ನ ಪಕ್ಕದಲ್ಲಿದ್ದ ಸಣ್ಣ water falls ನಲ್ಲಿ ಮುಖ ತೊಳೆದು,  ಟೀ ಕುಡಿದು ಮುಂದೆ ನಡೆದೆವು.




ಇಲ್ಲಿಂದ ನಮ್ಮ ಪಯಣ ಸಾಗಿದ್ದು "ದೋಣಿಗಲ್" ರೈಲ್ವೆ ನಿಲ್ದಾಣದ ಕಡೆಗೆ ಮತ್ತು ನಮ್ಮ "Target" "ಎಡಕುಮರಿ". ಅಂದರೆ ನಮ್ಮ plan ಇದ್ದದ್ದು ದೋಣಿಗಲ್ ನಿಂದ ಎಡಕುಮರಿ ವರೆಗೆ ಕಾಲು ನಡಿಗೆ ಅದೂ ರೈಲ್ವೇ ಹಳಿಯ ಮೇಲೆ!!!.





ನಿರಂತರ ಮಳೆಯಿಂದ ರೈಲ್ವೇ ಹಳಿಯೆಲ್ಲ ಸ್ವಚ್ಚವಾಗಿತ್ತು. ಇದರಮೇಲೆ ನಡೆಯೋದೇ ಒಂದು ಥರಾ ಮಜಾ :). ಸ್ವಲ್ಪ ದೂರ ಸಾಗಿದ ನಂತರ ಒಂದು ಸಣ್ಣ ಗುಡಿಸಲು ಸಿಕ್ಕಿತು. ಇದೇ ಬೆಳಗಿನ ತಿಂಡಿಗೆ ಸರಿಯಾದ ಜಾಗ ಎಂದು ಕುಳಿತುಬಿಟ್ಟೆವು.


ಎಲ್ಲಿ ನೋಡಿದರಲ್ಲಿ ಹಸಿರು, ಆಗಾಗ ಬರುವ ತುಂತುರು ಮಳೆ, ಹಕ್ಕಿಯ ಚಿಲಿಪಿಲಿ, ಅಲ್ಲಲ್ಲಿ ಸಿಗುವ ಸಣ್ಣ ಪುಟ್ಟ ಮಳೆಗಾಲದ  ಜಲಧಾರೆಗಳು, ಜನಜಂಗುಳಿಯಿಲ್ಲದ ಸ್ವಚ್ಛ ಪ್ರದೇಶ, ಅಬ್ಬ ಸ್ವರ್ಗಕ್ಕೆ ಮೂರೇ ಗೇಣು ಅನಿಸುವ ಭಾವನೆ.  ಅಲ್ಲೇ ಸ್ವಲ್ಪ ದೊಡ್ಡ ಜಲಧಾರೆ ನೋಡಿ ಸ್ನಾನಕ್ಕೆ ಹೊರಟೆವು.



ಆಗಾಗ ಸಿಗುತ್ತಿದ್ದ ಗುಹೆಗಳನ್ನು ನೋಡುವುದು ಮತ್ತು ಅದರ ಮೂಲಕ ಸಾಗುವುದೇ ಮೈ ರೋಮಾಂಚನ ಗೊಳಿಸುವ ಸಂಗತಿ. ಕೆಲವು ಗುಹೆಗಳು ಸಣ್ಣದಾಗಿದ್ದು ಮತ್ತೆ ಕೆಲವು ಬಹಳ ಉದ್ದನೆಯದಾಗಿದ್ದವು. ಗುಹೆಯ ಒಳಗೆ ಹೋದಂತೆ ಮನಸ್ಸಿನಲ್ಲಿ ಇಲ್ಲಸಲ್ಲದ ಪ್ರಶ್ನೆಗಳು; ಗುಹೆಯಲ್ಲಿ  ಹಾವುಗಳಿದ್ದರೆ, ಅದನ್ನು ನಾವು ಮೆಟ್ಟಿದರೆ, ಗುಹೆಯಲ್ಲಿ ಯಾವುದಾದರು ಕಾಡುಪ್ರಾಣಿಗಳಿದ್ದರೆ, ನಾವು ಗುಹೆಯಲ್ಲಿದ್ದಾಗ ರೈಲು ಬಂದುಬಿಟ್ಟರೆ, ಅಬ್ಬಾ ನೂರಾರು ಪ್ರಶ್ನೆಗಳು. ಅತಿ ದೊಡ್ಡ ಗುಹೆ ಇದ್ದದ್ದು ೯೦೦ ಮೀಟರ್ ನಷ್ಟು. ನಮ್ಮಲ್ಲಿದ್ದ ಒಂದು ಟಾರ್ಚ್ ಕೂಡ ಅರ್ಧದಾರಿಯಲ್ಲಿ ಕೈಕೊಟ್ಟಿತ್ತು. ಇನ್ನೇನು ೮೦೦ ಮೀಟರ್ ನಷ್ಟು ದೂರ ತಲುಪಿದ್ದೆವು. ಬಂತು ನೋಡಿ ರೈಲಿನ ಶಬ್ದ!!!!!.






ಜೀವ ಉಳಿದರೆ ಸಾಕು, ಹಾವೋ ಚೇಳೋ ಎಂದು ಲೆಕ್ಕಿಸದೆ, ಶ್ರೀ ಸುಭ್ರಮಣ್ಯನ ಹೆಸರು ಹೇಳಿ ಓಡಿದೆವು ನೋಡಿ. ಒಂದು ಸಣ್ಣ ಮೊಬೈಲ್ ಟಾರ್ಚ್ ನ ಸಹಾಯದಿಂದ ಮೂರೂ ಮಂದಿ ಓಡಿ, ಗುಹೆಯ ಇನ್ನೊಂದು ಬದಿಯ ಬಾಗಿಲು ಬಂದಂತೆ ಬದಿಯಲ್ಲಿ ಜಿಗಿದೆವು. ಕೆಲವು ಸೆಕೆಂಡ್  ಗಳ ಅಂತರದಲ್ಲೇ ರೈಲು ಬಂತು. ಮೂರೂ ಮಂದಿ ಒಬ್ಬರ ಮುಖವನ್ನೂಬರು ನೋಡುತ್ತಾ ಹೇಳಿದ್ದಿ ಒಂದೇ ಮಾತು. "Just miss maga". ಆಗ ನಕ್ಕ ನಗು ಇನ್ನೂ ನನ್ನ ಕಿವಿಯಲ್ಲಿದೆ :).
ಮಳೆಗೆ ಲೆಕ್ಕಿಸದೆ ದಾರಿಯಲ್ಲಿ ಸಣ್ಣ ತೋಡಿನ ತೀರದಲ್ಲಿ ಊಟಮುಗಿಸಿ ಯಡಕುಮರಿಯ ಕಡೆಗೆ ಪಯಣ ಮುಂದುವರೆಸಿದೆವು. ಸುಮಾರು ೨೦ ಕಿಲೋಮೀಟರ್ ನಷ್ಟು, ರೈಲ್ವೆ ಹಳಿಯ ಮೇಲೆ ಸಾಗಿದ ನಂತರ ಬಂದೇ ಬಿಟ್ಟಿತು "ಎಡಕುಮರಿ".





ಅಲ್ಲಿ ಹೋಗುವಷ್ಟರಲ್ಲಿ ಅರ್ಧ ಜೀವ ಮುಗಿದಿತ್ತು. ಅಲ್ಲೇ ಒಬ್ಬ ರೈಲ್ವೆ ಕಾರ್ಮಿಕನ ಮನೆಯಲ್ಲಿ ಉಳಿದು, ಅಡುಗೆ ಮಾಡಿ, ತಿಂದು, ಮಲಗಿದೆವು. ಬೆಳಗ್ಗೆ 3 ಘಂಟೆಗೆ Alarm fix ಆಗಿತ್ತು. ಅಂದು ಆಗಸ್ಟ್ ೧೫. ಸ್ವಾತಂತ್ರ ದಿನೊತ್ಸವ. ಬೆಳಗ್ಗೆ ಮೂರಕ್ಕೆ ಎದ್ದು ನಾನು ಮತ್ತು ಲೋಕಿ ರೈಲ್ವೆ ನಿಲ್ದಾಣದ ಬದಿಯಲ್ಲೇ ನಾವು ತೆಗೆದುಕೊಂಡುಹೋಗಿದ್ದ flag ನಿಂದ "Flag Hosting" ಮಾಡಿದೆವು :). ಅಲ್ಲಿಂದ 3:30 AM ನ ರೈಲು ಹಿಡಿದು ಕುಕ್ಕೆಸುಭ್ರಮಣ್ಯ ತಲುಪಿದೆವು.
ಕುಮಾರಧಾರಾ ನದಿಯಲ್ಲಿ ಸ್ನಾನ ಮಾಡಿ,  ಶ್ರೀ ಸುಭ್ರಮಣ್ಯನ ದರ್ಶನ ಪಡೆದು, ಬೆಂಗಳೂರಿನತ್ತ ಹೊರಟೆವು.




 




ಈಗ ಈ ಜಾಗಕ್ಕೆ ಹೋಗಲು ನಿಷೇದಾಜ್ಞೆ ಇದೆಯಂತೆ. ಇಂಥದ ಪ್ರದೇಶವನ್ನು ನೋಡಲು ಅವಕಾಶ ಸಿಕ್ಕ ನಮ್ಮನ್ನು ನಾವು ಪುಣ್ಯವಂತರೆಂದು ಭಾವಿಸುತ್ತೇವೆ. ಇಂತಹ ಜಾಗಕ್ಕೆ ಹೋಗಿ ಕಳೆದ ಕ್ಷಣಗಳು ಎಂದಿಗೂ ಮರೆಯಲು ಸಾಧ್ಯವಿಲ್ಲ :).

4 comments:

  1. Tumba chennagide... :) hale nenapu sihi nenapu!

    ReplyDelete
  2. Finally got a chance to read your blog and glad that you kept up with it(unlike me) :) Keep going!

    ReplyDelete
  3. Feel Like visiting this place...U have written it so nicely.Good One keep it up

    ReplyDelete